ಧರ್ಮಜಾಲಿಕ
ವಿದಿಶಾನಗರವಾಸಿಯಾಗಿದ್ದ ಒಬ್ಬ ಬ್ರಾಹ್ಮಣ. ವೇದಶಾಸ್ತ್ರ ನಿಪುಣನಾದ ಈತ ಪಾಂಡಿತ್ಯದಲ್ಲಿ ಬೃಹಸ್ಪತಿಗೆ ಸಮಾನವೆನಿಸಿದ್ದ. ಈತ ಇತರರಿಗೆ ಧರ್ಮಬೋಧನೆ ಮಾಡುತ್ತಿದ್ದನೇ ಹೊರತು ತಾನು ಮಾತ್ರ ಅತ್ಯಂತ ದುರಾಚಾರಿಯಾಗಿ ಮಾಂಸ ಮದ್ಯಾದಿಗಳನ್ನು ಸೇವಿಸುತ್ತ ಸ್ತ್ರೀಲೋಲನಾಗಿರುತ್ತಿದ್ದ. ಜನರನ್ನು ಮೋಸಗೊಳಿಸಲು ಬೇಡರಂತೆ ಧರ್ಮವೆಂಬ ಬಲೆ ಬೀಸುತ್ತಿದ್ದ ಕಾರಣ ಈತ ಧರ್ಮಜಾಲಿಕನೆನಿಸಿದ್ದ. ಹೀಗೆ ಪರಶು ಪಾಪಿಷ್ಠನೆನಿಸಿದ ಈತ ಅನೇಕ ನರಕಯಾತನೆಗಳನ್ನು ಅನುಭವಿಸಿ ಏಳು ಜನ್ಮಗಳ ತರುವಾಯ ಬ್ರಾಹ್ಮಣಪುತ್ರನಾಗಿ ಹುಟ್ಟಿ, ಹಿಂದಣ ಜನ್ಮಗಳ ಸ್ಮರಣೆ ಪಡೆದು ತನ್ನ ಏಳನೆಯ ವರ್ಷದಲ್ಲೇ ತಪಸ್ಸು ಮಾಡತೊಡಗಿದ. ನಂದಭದ್ರ ಎಂಬಾತನಿಗೆ ಧರ್ಮ ರಹಸ್ಯಗಳನ್ನೂ ಬೋಧಿಸಿ, ಏಳು ದಿನ ಪ್ರಾಯೋಪವೇಶ ಮಾಡಿ ದೇಹ ತೊರೆದ.  ನಂದಭದ್ರ ಆ ಸ್ಥಳದಲ್ಲಿ ಬಾಲಾದಿತ್ಯವೆಂಬ ಸೂರ್ಯಬಿಂಬವನ್ನು ಸ್ಥಾಪಿಸಿದ. ಈ ವೃತ್ತಾಂತ ಸ್ಕಂದ ಪುರಾಣದಲ್ಲಿ ಬಂದಿದೆ.
(ಎಸ್.ಆರ್.ಎಂಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ